ಪತ್ನಿಯ ನೆನಪಲ್ಲಿ

12:09 AM 0 Comments A+ a-



ಈ ಗಾಳಿ ಏಕೆ ನಿಂತಿದೆ ,
ಅಲೆಗಳೇಕೆ ಪಿಸುಗುಡುತ್ತಿದೆ ?
ಮರಳ ರಾಶಿ ಏಕೆ ನನ್ನತ್ತ ಧಾವಿಸುತ್ತಿದೆ ?
ಮೋಡ ಏಕೆ ನನ್ನ ಆವರಿಸಿದೆ ?
ಏನೋ ದುಗುಡ, ಏನೋ ಮಾಯೆ.
ಮಳೆ ಹನಿಗಳ ಆಗಮನ,
ಕಾಮನ ಬಿಲ್ಲಿನ ನರ್ತನ,
ಏನಿದು ಮರೀಚಿಕೆ?
ನನ್ನೇಕೆ ಕರಿಯುತ್ತಿದೆ ?
ಕರೆಯುವುದಾದರೂ ಏತಕೆ ?
ನನ್ನಲ್ಲಿ ಏನಿದೆ ಎಂದೇ ಅರ್ಥ ಆಗದು.
ಎದೆ ಬಗೆದರೂ ಸಿಗುವುದೇನಿದೆ,
ಪ್ರೀತಿ, ಕರುಣೆ ಮತ್ತು ನೆನಪು.
ಪ್ರೀತಿ ಎಂಬ ಅಗಾಧ ರತ್ನ,
ದುಂಬಿ ಮತ್ತು ಹೂವಿನ ಪ್ರೀತಿ,
ಮೀನು ಮತ್ತು ನೀರಿನ ಪ್ರೀತಿ,
ಚಾರಣ ಮತ್ತು ನನ್ನ ಪ್ರೀತಿ ,
ನನ್ನ ಮತ್ತು ನಿನ್ನ ಪ್ರೀತಿ.
ಕರುಣೆ ಎಂಬ ಸಂಜೀವಿನಿ,
ಜ್ಞಾನಕ್ಕೆ ಮೌಢ್ಯದ ಮೇಲೆ ಇರುವ ಕರುಣೆ,
ದೇವರು ನನ್ನ ಮೇಲೆ ಇಟ್ಟ ಕರುಣೆ ,
ಸಾವಿನ ದವಡೆಯಿಂದ ಬದುಕಿಸಿದ ಕರುಣೆ,
ಪ್ರೀತಿಗೆ ಸಿದ್ದಂತಾದ ಮೇಲೆ ಇರುವ ಕರುಣೆ .
ನೆನಪು ಎಂಬ ಭರವಸೆ
ನಿನ್ನ ಕೈ ಹಿಡಿದ ನೆನಪು
ಪುಟ ತಿರುಚಿದಾಗ ಆಗುವ ಮಧುರ ನೆನಪು,
ನಿನ್ನ ತಿದ್ದು ತೀಡಿದ ಸಹನೆಯ ನೆನಪು
ನಿನ್ನ ನಗುವಲ್ಲಿ ಮೈ ಮರೆತ ನೆನಪು
ನೀನಿಲ್ಲದ ಕ್ಷಣ ಕ್ಷಣಗಳು
ನಿಶ್ಶಬ್ದದ ಭೀತಿಯ ಆವರಿಸಲು
ನಿನ್ನ ನಗುವೆಲ್ಲಿ ಎಂದು ಹುಡುಕಾಡುತಿರಲು
ನನ್ನ ಪ್ರೇಮ ಸಂದೇಶಕ್ಕೆ ದೂತರಾಗಿ
ವರುಣಾದಿಗಳು ಕಾಯುತಿರಲು
ಇಡೀ ವಿಶ್ವವೇ ಮರೀಚಿಕೆ ಆದಂತಿದೆ.
ಕೊನೆಗೂ ಬಾಲ್ಯದಿಂದಲೂ
ನನ್ನ ಕಾಲ್ಪ್ನಿಕ ಜಗದ ರೂವಾರಿ
ಮೇಘದೂತನ ಆರಿಸಲು
ಮಿಕ್ಕವರೆಲ್ಲ ಸ್ತಬ್ಧ.
ಮುಂದಿನ ದಾರಿಯೇನೋ
ಸಾಗರದಾಚೆಯ ದಾಟಿ
ಪಶ್ಚಿಮ ಘಟ್ಟಗಳ ಸುತ್ತಿ
ಸಾಗುತಿದೆ ಅದೋ ನನ್ನ ಪ್ರೇಮದ ರೂವಾರಿ.
ಮುತ್ತು ರತ್ನಗಳಿಗೆ ಸಾಟಿ
ನಿನ್ನ ಒಡನಾಟದ ಧಾಟಿ
ಮರಳಿ ಬೇಗ ಬರುವೆ
ಸಿಂಹಳದ ಮತ್ತೊಂದು ಕತೆಯೊಂದಿಗೆ.
ಮರಳಿ ಬೇಗ ಬರುವೆ
ಪ್ರೇಮ ಸಿಂಚನದೊಂದಿಗೆ.
ಪ್ರತಿ ಊರಿಗೂ ಹೋದಾಗ ಒಂದು ಕತೆ ಇದೆ. ಬಸ್ ಸ್ಟ್ಯಾಂಡಲ್ಲಿ ಮಲಗಿದ್ದಾಗಿರಬಹುದು. ೧೦ ಕಿ. ಮೀ ಬ್ಯಾಕ್ಪ್ಯಾಕ್ ಹಿಡಿದು ನಡೆದಿರಬಹುದು . ಎಲ್ಲದಕ್ಕೂ ಒಂದು ಬೆಂಬಲಕ್ಕೆ ನಿಂತಿದ್ದ ಶ್ರೀಮತಿ ವನಿತಾ ಸಂತೋಷ ಅವರಿಗಾಗಿ. ಶ್ರೀಲಂಕಾದಲ್ಲಿ ಇದ್ದಾಗ ನನ್ನ ಪತ್ನಿಯ ನೆನಪಲ್ಲಿ ಬರೆದಿದ್ದು.
- ಅಲೆಮಾರಿ ಕವಿ