ಪ್ರೀತಿ ಎಂಬ ಕಡಲಲಿ

10:38 AM 0 Comments A+ a-

ಪ್ರೀತಿ  ಎಂಬ  ಕಡಲಲಿ
ತೇಲಿ ಹೋದರೇನು ?
ಬರುವೆನಲ್ಲಾ  ದಡಕ್ಕೆ 
ನುಚ್ಚು ನೂರಾಗಿ ನಾನು.

ನಿನ್ನ ಪ್ರೀತಿಯಿಂದ ದೂರ,
ಹೋಗಲೆಂದು ನಾನು
ಈಜಿ  ಈಜಿ ಹೋದರೆ
ಆಳಕ್ಕೆ ಕರೆದುಕೊಳ್ಳುತ್ತಿರುವುದು  ಏನು ?

ಸುಂದರ ಕಡಲು
ಚಂದದ ಸೂರ್ಯನ
ಮುಟ್ಟುವ ಧೈರ್ಯವೇಕೆ?
ಬೂದಿಯೋ  ಚೂರೋ  ಏನೆಂದು ಕಾಣೆ.

ಜಾತಿ  ಎಂಬ  ವಿಷದಲ್ಲಿ
ಧರ್ಮವೆಂಬ  ಕಳೆದು  ಹೋದ  ದಾರಿಯಲಿ,
ನಿನ್ನ ನೋಟವೇಕೆ
ನನ್ನ  ಕುರುಡು  ಮಾಡಿಸಿತು ?

ನಿನ್ನ  ಕೋಪದಲ್ಲಿ
ಸೂರ್ಯನ ನಾನು ಕಂಡೆ.
ನಿನ್ನ ಪ್ರೀತಿಯಲ್ಲಿ 
ಸುಂದರ ಕಡಲನು ಕಂಡೆ.

ಎಷ್ಟು ಆಳವೆಂದು  ತಿಳಿಯಲು,
ಎಷ್ಟು ತಾಪವೆಂದು ಅನುಭವಿಸಲು,
ಇಳಿದು ಜಿಗಿದು ಇಳಿದರೆ
ಹೊರಬರಲು ದಾರಿಯೇನು ?

ಸಮಾಜವೆಂಬ ಕಣ್ಣು
ಕಟ್ಟುಪಾಡು ಎಂಬ ಬೇಲಿ,
ಹರಿದು ಹಾಕಲಾರದ ಕೈ,
ಸುಳಿಯಲ್ಲಿ ಸಿಕ್ಕಿರುವ  ಕಾಲು.

ಕೊನೆಗೂ ಒಡೆದು ಹೊರಬರಲು,
ಒಡೆದು ಹೋದ ಮನಸ್ಸಿಗೆ,
ಚೂರು ಚೂರಾದ ಹೃದಯಕ್ಕೆ,
ಭರವಸೆಯೇ ಮುಲಾಮು.

ಹಿಡಿದು ಬಂದ ದಾರಿ
ನೋವಿನಿಂದ ನಡೆಸಿದ ಬದುಕು,
ನನ್ನ ನಾ ಕಂಡುಕೊಂಡ  ಬಗೆ,
ಬೆಚ್ಚಿ  ಬೀಳಿಸುವ  ಕಥೆ,

ಹೇಳಿದರೆ ಕಥೆ ಮುಗಿಯದು.
ಮುಗಿದರೆ ಅದು ಕಟ್ಟ ಕಥೆಯು
ದಡಕ್ಕೆ ಸೇರಿದ್ದೇ ಒಂದು ಸಾಹಸಗಾಥೆ. 
ನುಚ್ಚು ನೂರಾದ ಕನಸ್ಸೇ ಒಂದು ಜೀವನಗಾಥೆ.