ಅಮ್ಮ ನಿನ್ನ ನೋಡುವ ಹಂಬಲದಲ್ಲಿ
ಪ್ರೀತಿಯ ಅಮ್ಮಹೇಗಿದ್ದೀರಾ ಅಂತ ಕೇಳೋದಿಲ್ಲ. ನನ್ನ ಅಮ್ಮ ಯಾವಾಗಲು ಚೆನ್ನಾಗಿರಬೇಕು ಎಂಬುದೇ ನನ್ನ ಆಸೆ. ನಿಮಗೇನಾದರೂ ಆ ದೇವರು ಮನಸ್ಸು ನೋಯಿಸಿದರೆ ಅವನನ್ನು ಎಂದೆಂದಿಗೂ ಕ್ಷಮಿಸಲಾರೆ. ಇನ್ನು ನನ್ನ ಬಗ್ಗೆ ಕೇಳೇ ಕೇಳ್ತಿರಾ. ಅದು ನಂಗೆ ಗೊತ್ತಿದೆ.
ಬೆಳಗ್ಗೆ ಎದ್ದದ್ದಾಯಿತು. ಆಫೀಸಿಗೆ ಲೇಟಾಗಿದೆ. ಗಡಿಬಿಡಿಯಲ್ಲಿ ಬಸ್ ಸ್ಟಾಂಡಲ್ಲಿ ನಿಂತದ್ದಾಯಿತು.ಬಸ್ಸು ಹತ್ತಿದ್ದೇನೆ. ಅದೇ ೧೭೬ ಬಸ್. ಕೆಲವು ದಿನಾಲೂ ನೋಡುವ ಮುಖಗಳು. ಒಂದು ಚಿಕ್ಕ ನಗೆಯಲ್ಲಿ ಮುಗಿದು ಹೋಯಿತು ಮಾತುಕತೆ. ಆಫೀಸಿನಲ್ಲಿ ಒಮ್ಮೆ ಕುಳಿತರೆ ಆಯಿತು, ಕೆಲಸ ಶುರು. ಅಲ್ಲಿ ಕೆಲಸ ಬಿಟ್ಟು ಬೇರೇನೂ ಮಾತನಾಡೋದಿಲ್ಲ. ಮನೆಗೆ ಬರಬೇಕಾದರೆ ರಾತ್ರಿ ೧೧ ರ ಆಸುಪಾಸು. ಅಣ್ಣನಾ? ಅವನು ಇತ್ತೀಚಿಗೆ ಬೇಗ ಬರ್ತಿದ್ದಾನೆ. ಆದರೆ ಊಟ ಆಗಿ ಎಲ್ಲ ಮುಗಿಸುವಾಗ ರಾತ್ರಿ ೨ ರ ಸಮಯ. ಇನ್ನು ಮಾತಾಡೋದೆನು ಬಂತು, ಮಲಗಲಿಕ್ಕೆ ಕಾತುರವಾಗಿರ್ತಿವಿ.ನಂಗೊತ್ತಮ್ಮ ಬೇಗ ಮಲಗು ಅಂತ ಹೇಳ್ತಿರಾ .ಏನು ಮಾಡೋದಮ್ಮ, ನಿನ್ನ ಬಾಯಿ ತುತ್ತು ತಿನ್ನದೇ ಬೇಗ ನಿದ್ರೆ ಬರೋದಿಲ್ಲ. ಈ ಹೊಟ್ಟೆಬಾಕನಿಗೆ ನೀವು ಬಡಿಸಿಲ್ಲಾಂದರೆ ಊಟ ಅಷ್ಟಕ್ಕೆ ಅಸ್ಟೇ.
ನನಗಿನ್ನೂ ನೆನಪಿದೆ ಆ ದಿನಗಳು. ನಾನು ರವಿವಾರ ಬಂತೆಂದರೆ ಟಿವಿ ಮುಂದೆ ಪ್ರತ್ಯಕ್ಷ. ಮಹಾಭಾರತ, ಶಕ್ತಿಮಾನ್ ಮುಗಿಯುವವರೆಗೂ ನಾನು ಎಳೋದಿಲ್ಲಾಗಿತ್ತು. ನೀವೋ ಈ ಪ್ರೀತಿಯ ಪಾಪುಗೆ ಅಲ್ಲೇ ಉಪಹಾರ ಭೋಜನ ಒದಗಿಸುತ್ತಿದ್ದಿದ್ದು ನೆನಪಿದೆ. ಆ ಮೇಲೆ ನಾನು ಅಕ್ಕನ ಪುಸ್ತಕನ ಕದ್ದು ಮುಚ್ಚಿ ಓದ್ತಾ ಇದ್ದೆ. ರೋಮಿಯೋ ಜೂಲಿಯಟ್, ಹ್ಯಾಮ್ಲೆಟ್, ಶಾಕುಂತಲಾ ಹೀಗೆ ಹತ್ತಾರು ಪುಸ್ತಕ ಮುಗಿಸಿ ಬಿಟ್ಟಿದ್ದೆ. ಅಕ್ಕ ನಿನ್ನ ಪುಸ್ತಕ ಓದೋ, ಇವೆಲ್ಲಾ ಓದೋ ವಯಸ್ಸು ನಿನ್ದಲ್ಲಾ ಅಂತಿದ್ದರೆ, ನೀವು ಈ ಮುದ್ದು ಮಗನ ರಕ್ಷಣೆಗೆ ಬರ್ತಿದ್ದರಲ್ಲಾ. ಕ್ರಿಕೆಟ್ ಎನ್ನೋ ಹುಚ್ಚು ಆಟದ ಹಿಂದೆ ಬಿದ್ದಾಗ ಮನೆಗೆ ಬಂದ ತಕ್ಷಣ ಹುಸುಳಿ, ಅವಲಕ್ಕಿ, ಶೀರಾ ಮಾಡಿ ಕೊಡುತ್ತಿದ್ದಿದ್ದು ಹೇಗೆ ಮರೆಯಲಿ. ಪಪ್ಪಾ ತಂದಿದ್ದ ತಿಂಡಿಗಳನ್ನೆಲ್ಲಾ ಒಬ್ಬನೇ ಮುಗಿಸಿದರೂ ಚಿಕ್ಕವನು ಎಂದು ಮುದ್ದಿನಿಂದ ಅಪ್ಪಿಕೊಳ್ಳುತ್ತಿದ್ದ ಗಳಿಗೆ ನನಗೆ ಬರವಸೆ ಮೂಡಿಸಿತ್ತು. ನಾನು ಮಾಡುವ ಎಲ್ಲ ಕೆಲಸದ ಹಿಂದೆ ನೀವು ಇರುತ್ತೀರಾ ಎಂಬ ಬರವಸೆ. ಬಹುಷಃ ನೀವು ಇಟ್ಟಿರುವ ಪ್ರೀತಿ ನನ್ನನ್ನು ಸರಿ ದಾರಿಯಲ್ಲಿ ನಡೆಸಿದೆ ಎಂದರೆ ತಪ್ಪಾಗಲ್ಲ.
ನಾನು ನನ್ನ ಒರೆಗೆಯ ಹುಡುಗಿಯರ ಬಗ್ಗೆ ಅಕ್ಕನೊಂದಿಗೆ ಹೇಳುತ್ತಿದ್ದರೆ ನೀವು ನಗುತ್ತಾ ಇರ್ತಿದ್ರಿ. ಹೈಸ್ಕೂಲಿನ ಪ್ರೇಮಾಯಣ ಬಹಿರಂಗವಾದಾಗ ಆಗಲಿ, ಕಾಲೇಜಿನ ಕಟ್ಟ ಕಥೆಗಳು ಸ್ಪೋಟಗೊಂಡಾಗವಾಗಲಿ ತಲೆ ಕೆಡಿಸಿಕೊಳ್ಳದೆ ಬುದ್ದಿವಾದ ಹೇಳಿದ ನಿಮ್ಮ ಮಾತುಗಳು ಯಾವಾಗಲೂ ನನ್ನ ಎಚ್ಚರಿಸುತ್ತದೆ.
ಬಹುಶಃ ಉಜಿರೆಯ ದಿನಗಳು ನನ್ನ ಪಾಡಿಗೆ ಬಹಳ ಕಷ್ಟದ ದಿನಗಳು. ನಿಮ್ಮ ಬಿಟ್ಟು ವರ್ಷಗಟ್ಟಲೆ ಕಳೆಯಬೇಕಾದ ದಿನಗಳು. ಆ ದಿನಗಳಲ್ಲಿ ಫೋನಿನಲ್ಲಿ ನಾ ಕೇಳಿದ ನಿಮ್ಮ ಗಧ್ಗಧಿತ ಧ್ವನಿ, ನಿಮ್ಮ ಪ್ರೀತಿಯ ಸಂಕೇತ. ಉಜಿರೆ ಮುಗಿಯಿತು. ಇನ್ನು ಮುಂದೆ ನಿಮ್ಮ ಜೊತೆ ಹಾಯಾಗಿ ಕಳೆಯೋಣವೆಂದರೆ ಧಾರವಾಡದ ಕರೆಯೋಲೆ. ನಾಲ್ಕು ವರ್ಷಗಳು ಮುಗಿಯುವ ಹೊತ್ತಿಗೆ ನಿಮ್ಮಿಂದ ದೂರ ಇರುವುದು ಅಭ್ಯಾಸ ಆಗಿ ಹೋಗಿತ್ತು. ಪರೀಕ್ಷೆ ಮುಗಿದ ಮರುದಿನವೇ ಕೆಲಸಕ್ಕೆ ಹಾಜರಾದೆ. ಆಗೊಮ್ಮೆ ಈಗೊಮ್ಮೆ ಬಂದಾಗಲೆಲ್ಲ ನಾನು ನನ್ನ ಕಾಲೇಜಿನ ಹುಡುಗಿಯರ ಮೇಲೆ ಬರೆದೀರುವ ಕವನ ಓದಿ ಬೋರು ಹೊಡಿಸುತ್ತಿದ್ದೆ.ಒಂದು ದಿನವೂ ನಿಮಗೆ ಏನು ಬೇಕಮ್ಮ? ಎಂದು ಕೇಳಲಿಲ್ಲ. ನಿಮ್ಮ ಉತ್ತರಾನೂ ಗೊತ್ತು. ಮಗ ನೀನು ಚೆನ್ನಾಗಿರಬೇಕು. ಊಟ ಚೆನ್ನಾಗಿ ಮಾಡು. ಸಿಟ್ಟು ಕಡಿಮೆ ಮಾಡ್ಕೋ. ಅನ್ನ ಕೊಡೋ ದಣಿಗಳಿಗೆ ಎದುರುತ್ತರ ಕೊಡಬೇಡ. ಆದರೆ ಏನು ಮಾಡೋದಮ್ಮ. ಬಿಸಿ ರಕ್ತ. ನಿನ್ನಲ್ಲಿರುವ ಒಂದು ಒಳ್ಳೆ ಗುಣ ಇದ್ದಿದ್ರೆ ನಾನು ನಿನ್ನ ಬಗ್ಗೆ ತುಂಬಾ ಕಾಳಜಿ ವಹಿಸ್ತಿದ್ದೆ. ನಿನ್ನ ಜೊತೇನೆ ಇದ್ದು ನಿನ್ನ ನೋಡ್ಕೂತಿದ್ದೆ. ದಯವಿಟ್ಟು ಕ್ಷಮಿಸಮ್ಮ.
ಆ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಹತ್ತಿರ ಹೋದಾಗಲೆಲ್ಲ ಶಿರಸಿ ಬಸ್ ಹತ್ಕೊಂಡು ಬಂದು ಬಿಡಬೇಕು ಅನ್ನಿಸತ್ತೆ. ಆದರೆ ಏನು ಮಾಡೋದಮ್ಮ. ಈ ಕೆಲಸವೇ ಈ ರೀತಿ. ಈ ಅಮ್ಮಂದಿರ ದಿನದಂದು ನಿನಗೇನು ಕೊಡಲಿ ಎಂದು ತಿಳಿಯದೆ ಈ ಪತ್ರ ಬರೆದಿದ್ದೇನೆ. ನಿನ್ನ ನೋಡುವ ಹಂಬಲದಲ್ಲಿ ದಿನ ಕಳೆಯುತ್ತಿರುವ
ಇಂತಿ ನಿನ್ನ ಮುದ್ದಿನ
ಪುಟ್ಟ.
2 comments
Write commentsHeart Touching dear
Convey my wishes to your Mom Happy Mothers Day.
ReplyThank u Saira!!!
Reply