ಪ್ರೀತಿ ಎಂಬ ಕಡಲಲಿ

10:38 AM 0 Comments A+ a-

ಪ್ರೀತಿ  ಎಂಬ  ಕಡಲಲಿ
ತೇಲಿ ಹೋದರೇನು ?
ಬರುವೆನಲ್ಲಾ  ದಡಕ್ಕೆ 
ನುಚ್ಚು ನೂರಾಗಿ ನಾನು.

ನಿನ್ನ ಪ್ರೀತಿಯಿಂದ ದೂರ,
ಹೋಗಲೆಂದು ನಾನು
ಈಜಿ  ಈಜಿ ಹೋದರೆ
ಆಳಕ್ಕೆ ಕರೆದುಕೊಳ್ಳುತ್ತಿರುವುದು  ಏನು ?

ಸುಂದರ ಕಡಲು
ಚಂದದ ಸೂರ್ಯನ
ಮುಟ್ಟುವ ಧೈರ್ಯವೇಕೆ?
ಬೂದಿಯೋ  ಚೂರೋ  ಏನೆಂದು ಕಾಣೆ.

ಜಾತಿ  ಎಂಬ  ವಿಷದಲ್ಲಿ
ಧರ್ಮವೆಂಬ  ಕಳೆದು  ಹೋದ  ದಾರಿಯಲಿ,
ನಿನ್ನ ನೋಟವೇಕೆ
ನನ್ನ  ಕುರುಡು  ಮಾಡಿಸಿತು ?

ನಿನ್ನ  ಕೋಪದಲ್ಲಿ
ಸೂರ್ಯನ ನಾನು ಕಂಡೆ.
ನಿನ್ನ ಪ್ರೀತಿಯಲ್ಲಿ 
ಸುಂದರ ಕಡಲನು ಕಂಡೆ.

ಎಷ್ಟು ಆಳವೆಂದು  ತಿಳಿಯಲು,
ಎಷ್ಟು ತಾಪವೆಂದು ಅನುಭವಿಸಲು,
ಇಳಿದು ಜಿಗಿದು ಇಳಿದರೆ
ಹೊರಬರಲು ದಾರಿಯೇನು ?

ಸಮಾಜವೆಂಬ ಕಣ್ಣು
ಕಟ್ಟುಪಾಡು ಎಂಬ ಬೇಲಿ,
ಹರಿದು ಹಾಕಲಾರದ ಕೈ,
ಸುಳಿಯಲ್ಲಿ ಸಿಕ್ಕಿರುವ  ಕಾಲು.

ಕೊನೆಗೂ ಒಡೆದು ಹೊರಬರಲು,
ಒಡೆದು ಹೋದ ಮನಸ್ಸಿಗೆ,
ಚೂರು ಚೂರಾದ ಹೃದಯಕ್ಕೆ,
ಭರವಸೆಯೇ ಮುಲಾಮು.

ಹಿಡಿದು ಬಂದ ದಾರಿ
ನೋವಿನಿಂದ ನಡೆಸಿದ ಬದುಕು,
ನನ್ನ ನಾ ಕಂಡುಕೊಂಡ  ಬಗೆ,
ಬೆಚ್ಚಿ  ಬೀಳಿಸುವ  ಕಥೆ,

ಹೇಳಿದರೆ ಕಥೆ ಮುಗಿಯದು.
ಮುಗಿದರೆ ಅದು ಕಟ್ಟ ಕಥೆಯು
ದಡಕ್ಕೆ ಸೇರಿದ್ದೇ ಒಂದು ಸಾಹಸಗಾಥೆ. 
ನುಚ್ಚು ನೂರಾದ ಕನಸ್ಸೇ ಒಂದು ಜೀವನಗಾಥೆ.  

ಪತ್ನಿಯ ನೆನಪಲ್ಲಿ

12:09 AM 0 Comments A+ a-



ಈ ಗಾಳಿ ಏಕೆ ನಿಂತಿದೆ ,
ಅಲೆಗಳೇಕೆ ಪಿಸುಗುಡುತ್ತಿದೆ ?
ಮರಳ ರಾಶಿ ಏಕೆ ನನ್ನತ್ತ ಧಾವಿಸುತ್ತಿದೆ ?
ಮೋಡ ಏಕೆ ನನ್ನ ಆವರಿಸಿದೆ ?
ಏನೋ ದುಗುಡ, ಏನೋ ಮಾಯೆ.
ಮಳೆ ಹನಿಗಳ ಆಗಮನ,
ಕಾಮನ ಬಿಲ್ಲಿನ ನರ್ತನ,
ಏನಿದು ಮರೀಚಿಕೆ?
ನನ್ನೇಕೆ ಕರಿಯುತ್ತಿದೆ ?
ಕರೆಯುವುದಾದರೂ ಏತಕೆ ?
ನನ್ನಲ್ಲಿ ಏನಿದೆ ಎಂದೇ ಅರ್ಥ ಆಗದು.
ಎದೆ ಬಗೆದರೂ ಸಿಗುವುದೇನಿದೆ,
ಪ್ರೀತಿ, ಕರುಣೆ ಮತ್ತು ನೆನಪು.
ಪ್ರೀತಿ ಎಂಬ ಅಗಾಧ ರತ್ನ,
ದುಂಬಿ ಮತ್ತು ಹೂವಿನ ಪ್ರೀತಿ,
ಮೀನು ಮತ್ತು ನೀರಿನ ಪ್ರೀತಿ,
ಚಾರಣ ಮತ್ತು ನನ್ನ ಪ್ರೀತಿ ,
ನನ್ನ ಮತ್ತು ನಿನ್ನ ಪ್ರೀತಿ.
ಕರುಣೆ ಎಂಬ ಸಂಜೀವಿನಿ,
ಜ್ಞಾನಕ್ಕೆ ಮೌಢ್ಯದ ಮೇಲೆ ಇರುವ ಕರುಣೆ,
ದೇವರು ನನ್ನ ಮೇಲೆ ಇಟ್ಟ ಕರುಣೆ ,
ಸಾವಿನ ದವಡೆಯಿಂದ ಬದುಕಿಸಿದ ಕರುಣೆ,
ಪ್ರೀತಿಗೆ ಸಿದ್ದಂತಾದ ಮೇಲೆ ಇರುವ ಕರುಣೆ .
ನೆನಪು ಎಂಬ ಭರವಸೆ
ನಿನ್ನ ಕೈ ಹಿಡಿದ ನೆನಪು
ಪುಟ ತಿರುಚಿದಾಗ ಆಗುವ ಮಧುರ ನೆನಪು,
ನಿನ್ನ ತಿದ್ದು ತೀಡಿದ ಸಹನೆಯ ನೆನಪು
ನಿನ್ನ ನಗುವಲ್ಲಿ ಮೈ ಮರೆತ ನೆನಪು
ನೀನಿಲ್ಲದ ಕ್ಷಣ ಕ್ಷಣಗಳು
ನಿಶ್ಶಬ್ದದ ಭೀತಿಯ ಆವರಿಸಲು
ನಿನ್ನ ನಗುವೆಲ್ಲಿ ಎಂದು ಹುಡುಕಾಡುತಿರಲು
ನನ್ನ ಪ್ರೇಮ ಸಂದೇಶಕ್ಕೆ ದೂತರಾಗಿ
ವರುಣಾದಿಗಳು ಕಾಯುತಿರಲು
ಇಡೀ ವಿಶ್ವವೇ ಮರೀಚಿಕೆ ಆದಂತಿದೆ.
ಕೊನೆಗೂ ಬಾಲ್ಯದಿಂದಲೂ
ನನ್ನ ಕಾಲ್ಪ್ನಿಕ ಜಗದ ರೂವಾರಿ
ಮೇಘದೂತನ ಆರಿಸಲು
ಮಿಕ್ಕವರೆಲ್ಲ ಸ್ತಬ್ಧ.
ಮುಂದಿನ ದಾರಿಯೇನೋ
ಸಾಗರದಾಚೆಯ ದಾಟಿ
ಪಶ್ಚಿಮ ಘಟ್ಟಗಳ ಸುತ್ತಿ
ಸಾಗುತಿದೆ ಅದೋ ನನ್ನ ಪ್ರೇಮದ ರೂವಾರಿ.
ಮುತ್ತು ರತ್ನಗಳಿಗೆ ಸಾಟಿ
ನಿನ್ನ ಒಡನಾಟದ ಧಾಟಿ
ಮರಳಿ ಬೇಗ ಬರುವೆ
ಸಿಂಹಳದ ಮತ್ತೊಂದು ಕತೆಯೊಂದಿಗೆ.
ಮರಳಿ ಬೇಗ ಬರುವೆ
ಪ್ರೇಮ ಸಿಂಚನದೊಂದಿಗೆ.
ಪ್ರತಿ ಊರಿಗೂ ಹೋದಾಗ ಒಂದು ಕತೆ ಇದೆ. ಬಸ್ ಸ್ಟ್ಯಾಂಡಲ್ಲಿ ಮಲಗಿದ್ದಾಗಿರಬಹುದು. ೧೦ ಕಿ. ಮೀ ಬ್ಯಾಕ್ಪ್ಯಾಕ್ ಹಿಡಿದು ನಡೆದಿರಬಹುದು . ಎಲ್ಲದಕ್ಕೂ ಒಂದು ಬೆಂಬಲಕ್ಕೆ ನಿಂತಿದ್ದ ಶ್ರೀಮತಿ ವನಿತಾ ಸಂತೋಷ ಅವರಿಗಾಗಿ. ಶ್ರೀಲಂಕಾದಲ್ಲಿ ಇದ್ದಾಗ ನನ್ನ ಪತ್ನಿಯ ನೆನಪಲ್ಲಿ ಬರೆದಿದ್ದು.
- ಅಲೆಮಾರಿ ಕವಿ

ನೀ ಕೈ ಬೀಸಿ ಕರೆದರೆ

12:07 AM 0 Comments A+ a-

ನೀ ಕೈ ಬೀಸಿ ಕರೆದರೆ
ಬರುವೆನು ನಾ ಏದುಸಿರು ಬಿಡುತ
ಬರೆದ ಸಾಲಿಗೆ ಸಾಲು ಪೋಣಿಸಿ
ಹಾಡುವೆ ನಾ ಉಸಿರು ಎಳೆದು ಬಿಡುತ
ಕಣ್ಣಂಚಲಿ ಕಲ್ಬುರ್ಗಿಯ ಸುತ್ತಿ
ಕಲ್ಯಾಣದ ಬಸವನ ಪಾದಕ್ಕೆ ವಂದಿಸಿ ,
ಬೆಳಗಾವಿಯ ಕುಂದದ ರಸವುಂಡು
ಗದಗದ ನಾರಾಯಣನ ನಮಿಸಿ
ತುಂಗಭದ್ರೆಯಲಿ ತೇಲಾಡಲು
ಹಂಪಿಯ ವೈಭವದಿ ಮೆರೆಯುತ ,
ಕಿಷ್ಕಿಂದೆಯ ವಿಸ್ಮಯವ ಕಣ್ಣಂಚಲಿ ಸೆರೆ ಹಿಡಿಯುತ
ಪಂಪ ಸರೋವರದಿ ದಣಿವಾರಿಸಿ .
ಧಾರವಾಡದ ಸಿಹಿಯನು ಸವಿ ಸವಿದು
ದಾಂಡೇಲಿಯ ಕಾಳಿಯ ಸ್ಪರ್ಶಿಸಿ
ಅದು ರಭಸವೋ ಸಾವಿನ ಮೊಸಳೆಯೋ
ತಿಳಿಯದೆ ಕಳೆದು ಹೋದ ಪರಿಯಲಿ
ಜೋಗದ ಸಿರಿ ಕಂಡು
ಜಿಗಿ ಜಿಗಿದು ಕುಪ್ಪಳಿಸಿ
ಮನದಾಳದಿಂದ ಬರೆದ
ಪ್ರೀತಿಯ ಹನಿ ಹನಿಗಳು ಇವು.
ಸಾಗರದಾಚೆ ನೋಡುತ
ಸೂರ್ಯನ ಉದಯಕೆ ಕಾಯುತ
ಮರೆಯಾಗುವ ಕ್ಷಣದಿ
ಬೇಸರದಿ ಕಣ್ಣಂಚಲಿ ಹಿಡಿಯುತ
ರಾಯಣ್ಣನ ಕೋಟೆಯಲಿ
ಓಬವ್ವನ ಸ್ಮರಿಸುತ
ಬೆಣ್ಣೆಯ ದೋಸೆಯ
ಕರಗಿದ ರಸಗಳ ಸವಿಯುತ
ಮಲೆನಾಡಿನ ವೈಭವವ
ಚಾರಣದಿ ತುದಿ ಏರಿ
ಹಸಿ ಹಸಿರು ಸಂದೇಶ
ಜೀವ ಜೀವಕೆ ಬೆಸೆಯಲು
ಬೆಂದಕಾಳೂರಿನ ಕೋಟೆಯಲಿ
ಮಾನವನ್ಯಾರೆಂದು ಅರಿಯದೆ
ನಾ ನನ್ನ ಅರಿಯಲು
ಕ್ಷಣ ಕ್ಷಣವೂ ನಿನ್ನ ಸ್ಮರಿಸಲು
ಹೃದಯದ ಕವನವ
ನಿನ್ನ ಚರಣದಿ ಅರ್ಪಿಸಲು
ನೀ ಕೈ ಬೀಸಿ ಕರೆದರೆ
ಬರುವೆನು ಎಂದೆಂದಿಗೂ .
ಕರೆಯದೆ ಹೋದರೂ
ಮನದಲಿ ಕಾಣುವೆ ನಿನ್ನ ಎಂದೆಂದಿಗೂ.
- ಅಲೆಮಾರಿ ಕವಿ

ಶಬ್ದಗಳಲ್ಲಿ ಹೇಗೆ ಸೆರೆ ಹಿಡಿಯಲಿ ?

12:06 AM 0 Comments A+ a-

ಶಬ್ದಗಳಲ್ಲಿ ಹೇಗೆ ಸೆರೆ ಹಿಡಿಯಲಿ ?
ಹರಿಯುವ ನದಿಯಂತೆ ನೀನು .
ರಭಸದಲ್ಲಿ ಹರಿದು,
ಜಲಪಾತದಲ್ಲಿ ಭೋರ್ಗರೆಯುವಂತೆ,
ಕಲ್ಲುಮಣ್ಣುಗಳ ಸರಿಸಿ ಸವೆದು,
ಸಾಗರದಿ ತನ್ಮಯದಿ ಸೇರುವಂತೆ,
ಭಾವನೆಗಳ ಸಮರದಲ್ಲಿ,
ಪಂಚ ಬೂತಗಳೇ ನಿನ್ನಲ್ಲಿ ಲೀನರಾಗಿ,
ಪ್ರೀತಿ ,ಸ್ನೇಹ , ಮೋಸ , ಅಸೂಯೆಗಳ ಘರ್ಷಣೆಯಲ್ಲಿ,
ಮಾನವ ರಾಗವ ಬಿಡದ ಛಲಗಾತಿ ನೀನು .
ನಿರ್ಮಲ ಸ್ನೇಹದಿ,
ಪವಿತ್ರ ಪ್ರೇಮದಿ ,
ಭಾವ, ತಾಳ, ರಾಗಗಳ ಸಂಗೀತದಲಿ,
ತನ್ನ ತಾ ಕಂಡುಕೊಂಡ ಚೋಕರ ಬಾಲಿ ನೀನು.
ಭಾವನೆಗಳೇ ಹರಿದಾಡದ ಈ ಜಗದಲ್ಲಿ ,
ವಿಧವೆ ಎಂದು ಕರೆದುಕೊಳ್ಳುವೆ ಏಕೆ ?
ಪ್ರೀತಿ ಸಿಗದು ಎಂದು ಯೋಚಿಸದಿರು,
ನಿರ್ಮಲ ಮನಸ್ಸಿಗೆ ವಿಶ್ವದ ಜ್ಯೋತಿ ನೀನು.
ದೀಪದ ಹಣತೆಯು ಬೆಳಗಿದಂತೆ,
ನಿನ್ನ ಸೇವೆಯು ಪ್ರಜ್ವಲಿಸಲಿ.
ಏಳು ಬೀಳುಗಳ ಕಂಡವರೇ,
ಕತ್ತಲಿಂದ ಬೆಳಕಿನೆಡೆಗೆ ಕೈ ಹಿಡಿದು ನಡೆಸುವರು.
ನೀನು ಕೇವಲ ನೆನಪಾಗದಿರಲಿ,
ಓದಿದವರಿಗೆ ಬೆಳಕಾಗಲಿ.
ನಿನ್ನನ್ನು ಅವರಲ್ಲಿ ಕಂಡವರಿಗೆ,
ಒಂದು ಕನಸು ನನಸಾಗಲಿ.
ನೆನಪಿನ ಅಂಗಳದಲ್ಲಿ ಅಚ್ಚಳಿಯದಂತೆ
ಒಂದು ಮೂಲೆಯಲ್ಲಿ ಕುಳಿತಿರುವ
ನೀನು ಅಬಲೆಯಲ್ಲ , ಶಕ್ತಿ ನೀನು
ಕೇವಲ ಶಬ್ದದಲ್ಲಿ ಹೇಗಯ್ಯಾ ಸೆರೆ ಹಿಡಿಯಲಿ.
- ಅಲೆಮಾರಿ ಕವಿ

ಕಾಣದ ದೇವರ ಕಾಣದೆ ಕಂಡೆನು.

12:05 AM 0 Comments A+ a-

ಕಾಣದ ದೇವರ ಕಾಣದೆ ಕಂಡೆನು
ಶಿವ ನಿನ್ನ ರೂಪವ,
ಮನಸ್ಸ ಬಿಚ್ಚಿ ತೆರೆದು ಕಂಡೆನು
ಕಲೆಯು ನೀಡಿದ ಬಣ್ಣವ.
ಎತ್ತ ಹೋಗಲೆಂದು ತಿಳಿಯದ ನನಗೆ
ಕೈ ಅಲ್ಲಿ ನೀಡಿದ ಕುಂಚವ,
ತಿರುಗಿಸಿ ಪಳಗಿಸಿ ಕಂಡೆನು
ನಿನ್ನ ದಿವ್ಯ ರೂಪವ.
ಜಕಣನ ಕೈಗೆ ಕಂಡ
ಶಿಲೆಯಲ್ಲೂ ನಿನ್ನ ಸ್ವರೂಪವ,
ಮತ್ತೆ ಮತ್ತೆ ನೋಡ ಬಯಸದೇನು
ಕಲೆಯಲ್ಲಿ ಕಂಡ ಕೈಲಾಸವ.
ಕೈ ಸೆರೆ ಹಿಡಿದ ಕ್ಷಣದಲ್ಲಿ
ಶಿವನು ಬಿಡಿಸಿದ ಚಿತ್ರವ,
ಚಿಲಿಪಿಲಿಗುಟ್ಟುವ ಸದ್ದಿಗೆ
ಕೇಕೆ ಹಾಕಿದ ಮಗುವಿನ ನೃತ್ಯವ.
ಬಣ್ಣ ಬಡಿದರೇನು ?
ಕಾಲು ಕುಣಿದರೇನು ?
ಶಿವನು ಮೆಚ್ಚದ್ದು ನೃತ್ಯವೇ ?
ಮನಸಿಗೆ ಶರಣಾಗದ್ದು ಕಲೆಯೇ ?
ಎತ್ತ ನೋಡಿದರೂ ಡೊಂಬರಾಟ,
ಮೆಟ್ಟಿ ನಿಲ್ಲುವವನೇ ಶಿವ.
ಆತ್ಮ ಸಾಕ್ಷಿಗೆ ಕಾಣದ್ದೇನಿದೆ ?
ಯಶಸ್ಸು ಒಂದು ನೆಪವೇ.
ಮತ್ತೆ ಮತ್ತೆ ಹೇಳಲು ಬಯಸುವೆ,
ಶಿವ ಎಲ್ಲೆಂದರೆ ನನ್ನ ಕಲೆಯಲ್ಲಿ.
ಶಿವ ಎಲ್ಲೆಂದರೆ ನನ್ನ ಮನದಲ್ಲಿ.
ಶಿವ ಎಲ್ಲೆಂದರೆ ನನ್ನ ದೃಢ ಚಿಂತನೆಯಲ್ಲಿ.
ನನ್ನ ಅರಿಯುವ ಮಾರ್ಗವೇ ಕಲೆ.
ನನ್ನಲ್ಲೇನಿದೆಯೋ ಅದೇ ಶಿವ.
ನಾ ನನ್ನ ಅರಿಯದೆ ಶಿವನೆಲ್ಲಿ ದಕ್ಕುವನು.
ಕಂಡರಿಯದ ಕಣ್ಣೇ ನನ್ನ ಕಲೆ.
ಕಾಣದ ದೇವರ ಕಾಣದೆ ಕಂಡೆನು.
ಶಿವ ನಿನ್ನ ರೂಪವ
ನನ್ನ ಕಲೆಯಲ್ಲಿ
ನನ್ನ ಮನದಲ್ಲಿ.
- ಅಲೆಮಾರಿ ಕವಿ

ಸಾವು ಎಂದೂ ಕೊನೆಯಲ್ಲ

12:48 AM 0 Comments A+ a-

ಇಲ್ಲೊಂದು ಜೀವ ಹೋದಂತಿದೆ,
ಕಾರಣವೇನು ತಿಳಿಯದಾಗಿದೆ,
ದೇಹ ಆತ್ಮಕ್ಕೆ ಕೊಂಡಿ ಬಿಚ್ಚಿದೆ,
ಸ್ನೇಹ ಪ್ರೀತಿಯು ಅಮರವಾಗಿದೆ.

ಕಳೆದುಕೊಂಡೆ ಏನು ನಾನು ?
ನಗುವೇ ಏನು ನಿನ್ನ ಮೋಸ ?
ಹಿಂದೆ ಇದ್ದ ನೋವಿನಲ್ಲಿ
ಮೆರೆದು ಬಿಟ್ಟ ಜೀವ ನೀನು.

ಮರೆಯಲೆಂದೇ ತೆವಳಿದೆ ನಾನು,
ಮುಗ್ದ ಮೊಗದ ನೆನೆಸಿಕೊಂಡು
ಕರೆದರೆ ಬರುವುದಿಲ್ಲವೆನ್ನುತಿತ್ತೆ !
ಈ ಹಾಳುಮುಳು ತಿಂದ ದೇಹವು.

ಮನಸು ಒಂದು ವಿಚಿತ್ರವೂ
ಹೇಳು ಹೇಳದ ಕಪಟ ಸೂತ್ರದಾರನು,
ಹೇಳದಿರೆ ತುಸು ನಾಚುವುದು ,
ಹೇಳದಿದ್ದರೆ ತಡಬಡಿಸುವುದು.

ದೇಹ ಒಂದು ಪಾಕಶಾಲೆಯು
ರುಚಿಸಿದರೆ ನಾಲಿಗೆ ಬಿಡದು,
ದೇಹದ ರುಚಿ ತಿಂದ ಕಾಮನ
ಹೃದಯದ ಬಣ್ಣ ನೋಡುವವರಾರು ?

ಪ್ರೀತಿ ಕಾಮದ ನಡುವಿನಲ್ಲಿ
ಸೋತು ಬೆಂದ ಕೂಸು ನೀನು.
ನೋವಿಗೆ ಮುಲಾಮು ಹಾಕಿದೆನಷ್ಟೆ,
ನೋವನ್ನೇಕೆ ಕೊಲ್ಲದಾದೆನು.

ಮರೀಚಿಕೆ ಮರೀಚಿಕೆ
ಜೀವನ ಒಂದು ಮರೀಚಿಕೆ ,
ನಿನ್ನ ಸಾವ ಮುಂದೂಡಿದೆ,
ಸಾವನೇಕೆ ಜಯಿಸದಾದೆನು .

ಸಾವು ಎಂದೂ ಕೊನೆಯಲ್ಲ
ನಿನ್ನ ನೋವು ಎಂದೂ ಮರೆಯಲ್ಲ,
ದೇಹ  ಸುಖದಿ ಪ್ರೀತಿ ಮರೆತ
ಜೀವನ ಎಂದೂ ನಡೆಯಲ್ಲ.
ಮೋಸದಿಂದ ಬಾಳಿದಾತ
ನಿನ್ನ ಸಾವು ಕೂಡ ಈ ಮಣ್ಣಿಗೆ ಕೊನೆಯಲ್ಲ.

- ಅಲೆಮಾರಿ ಕವಿ (ಸಂತೋಷ ಬಿ.ಜೆ.)

ಎಲ್ಲಿ ಕೂತಿರುವೆ ನನ್ನೊಡತಿ

11:51 AM 0 Comments A+ a-

ಎಲ್ಲಿ  ಕೂತಿರುವೆ 
ನನಗೆ  ಪ್ರೀತಿಯ  ಕಲಿಸಿ.
ಎಲ್ಲಿ  ನಗುತಿರುವೆ
ಸ್ನೇಹದ  ಗೆರೆ  ದಾಟಿ .

ನಗುವಾಗಲಿ  ಅಳುವಾಗಲಿ
ಕೈ  ಹಿಡಿದು  ನನ್ನ  ನಡೆಸಿದೆ  ಓ  ದೇವತೆ.
ಕನಸೆನ್ನುವುದು  ಏನೆಂದು
ತಿಳಿಗೊಡಿಸಿದ  ಆ  ತನ್ಮಯತೆ.

ಮಲೆನಾಡಿನ  ತಂಗಾಳಿಗೆ
ನೀ  ಸೆಳೆದಾಗ  ಬಂದ ಬಿಸಿ  ಗಾಳಿಯು,.
ಕಣ್ಮುಚ್ಚಿ   ನೆನೆದಾಗ
ಬಂದ  ಬಿಗಿದಪ್ಪುಗೆಯು.
'
ಮರವಂತೆಯ  ಅಲೆದಾಡುತ
ಸೂರ್ಯನ  ಚಂದ್ರನ  ಕಿರಣಕೆ
ಮೈ ಸೋಕಿದಾಗ  ತಂದ  ತಿಳಿ  ಆಸೆಗೆ
ಎಳೆನೀರಿನ  ತಿಳಿ  ಲೇಪವು.

ನೀ ಓಡಿಸಿದ  ಗಾಡಿಯ ವೇಗಕೆ
ಹೆದರಾದರೂ  ಹಿಡಿದ  ಬಿಗಿದಪ್ಪುಗೆಯ
ನೋಡಲೆಂದೇ  ಬಂದ  ನವೀಲಿನ 
ಬಣ್ಣದ  ನೋಟವು , ಸುಗ್ಗಿ ಸುಗ್ಗಿ ನೃತ್ಯವು

ಹಿಂದೆ ಹಿಂದೆ ಹೋದ ಸಾಲು ಮರಗಳು 
ಇಣುಕಿ  ಇಣುಕಿ  ನೋಡಲೆಂದು 
ಕನ್ನಡಿಯಲಿ  ಕಂಡ  ನಿನ್ನ ಮುಗುಳುನಗೆಯು
ಅದನ್ನು ಕಂಡು ಹಿಗ್ಗಿದ  ಅಂಕು ಡೊಂಕು ಮರಗಳು

ಜಲಪಾತದಲ್ಲಿ  ನಡೆದಾಡಿದ
ನಿನ್ನ ಆ  ಮೈಮಾಟವು
ರತಿಯನ್ನೆ ನಾಚಿಸಿದ್ದು . 
ಮನ್ಮಥನ  ರಂಜಿಸಿದ್ದು .

ಮೋಡದ  ಮರೆಯಲಿ
ಮಗುವನ್ನು  ಕುಣಿಸಲು 
ನೀ  ಮಾಡಿದ ನೃತ್ಯಕೆ
ವರುಣನೇ  ಮಳೆಗೆರೆದಿದ್ದು

ಎಲ್ಲಿ  ಕೂತಿರುವೆ
ನನ್ನ  ಪ್ರೀತಿಯ  ಓ  ಗೆಳತೀ
ನನ್ನ  ಹೃಯದ  ಪ್ರಣಯಕ್ಕೆ
ನೀ  ಒಡತಿ  .. ನನ್ನೊಡತಿ .