ಕ್ಷಣ ಕ್ಷಣ ಕಳೆಯುತಿರಲು

11:19 AM 0 Comments A+ a-

ಕ್ಷಣ  ಕ್ಷಣ  ಕಳೆಯುತಿರಲು 

ಇನ್ಯಾರಿಗೋಸ್ಕರ  ಎಂಬ  ಈ  ಜೀವವು,

ಹಸುಗೂಸೊಂದು ಕರೆಯಲು  ನನ್ನ  

ಅವಳೇ  ಉಳಿದ  ಬದುಕಿನ  ನಿಮಿತ್ತವು.


ಕಾಣದ  ಕತ್ತಲಲ್ಲಿ  ದೀಪವಾಗಿ  ಬಂದೆ 

ಅಲೆಗಳಿಂದ  ತತ್ತರಿಸಿದ  ಜೀವಕೆ  ದಡವಾಗಿ  ಬಂದೆ 

ಪ್ರೀತಿಯ  ಹಾತೊರಿದ  ಮನಸ್ಸಿಗೆ  ಜೇನಾಗಿ  ಬಂದೆ 

ಕಾಣದ  ದಾರಿಗೆ  ಅಕ್ಷಿಯಾಗಿ  ಬಂದೆ .


ನಿನ್ನ  ನಗುವಲ್ಲಿ  ಜೀವನದ  ಅರ್ಥವ  ಕಂಡೆ 

ನಿನ್ನ  ನಡೆಯಲಿ  ಮುಂದಿನ  ಪುಟಗಳ  ಕಂಡೆ 

ನಿನ್ನ  ಹಟದಲಿ ನನಗರಿಯದ  ತಾಳ್ಮೆಯ  ಕಂಡೆ 

ನೀನಿರದ  ಕ್ಷಣದಲಿ  ನಿನ್ನ  ನೆನಪಲ್ಲೆ ಮುಳುಗಿದ  ತಂದೆಯ  ಕಂಡೆ 


ನಿನ್ನ  ಸ್ಪರ್ಶದಲಿ  ನನ್ನ  ಮುಗ್ಧತೆಯ  ಕಂಡೆ 

ನಿನ್ನ  ಜೋಗುಳದಲಿ  ನನ್ನ  ಸ್ವರಗಳ  ಕಂಡೆ 

ನಿನ್ನ  ತುಟಿಯಲಿ  ಮಾತುಗಳ  ಮುತ್ತುಗಳನು  ಕಂಡೆ 

ನಿನ್ನ  ಅಪ್ಪುಗೆಯಲಿ  ಇದೆ  ನನ್ನ  ಜಗವೆಂದು  ಅಂದು  ಕೊಂಡೆ 


ಈ  ಕ್ಷಣವು  ಜೀವನದ  ರಸಮಯ  ಕ್ಷಣವು 

ಕಳೆದು  ಹೋದರೆ  ಮತ್ತೆ  ಸಿಗದ  ಮಧುರ  ಕ್ಷಣವು

ಅಪ್ಪ  ಎನ್ನುವ  ಹೃದಯಲಿ  ಇರಲಿ  ಕಿಂಚಿತ್ತಿನ  ಸ್ಥಾನವು 

ಇನ್ನಷ್ಟು  ಬೆಳೆಯಲಿ  ನನ್ನಲ್ಲಿ  ತಾಯಿಯ  ಮಮಕಾರವು.


ಜಗದೊಡೆಯನಿಗೆ  ನಮಿಸುವೆ 

ಮನದರಸಿಯ  ಪ್ರೀತಿಸುವೆ 

ನನ್ನ  ಬುವಿಗೆ  ತಂದಿರಿಸಿದ 

ಆ  ನನ್ನ  ದೇವತೆಗೆ  ಪ್ರಾರ್ಥಿಸುವೆ  


ಕ್ಷಣ  ಕ್ಷಣ  ಕಳೆಯುತಿರಲು 

ಪ್ರತಿ  ಕ್ಷಣವನು  ಸೆರೆ  ಹಿಡಿಯುವೆ 

ನಡೆದ  ಹಾದಿಯಲಿ  

ಕಂದನು ತಲೆಯೆತ್ತಿ  ನಡೆಯುವಂತೆ  ಮುನ್ನುಗ್ಗುವೆ 

ಸ್ವಾಭಿಮಾನದಿ  ಕರೆಗೆ ಓಗುಡುವೆ 


ಈ  ಕ್ಷಣವು  ಜೀವನದ  ರಸಮಯ  ಕ್ಷಣವು 

ಕಳೆದು  ಹೋದರೆ  ಮತ್ತೆ  ಸಿಗದ  ಮಧುರ  ಕ್ಷಣವು

ಕ್ಷಣ  ಕ್ಷಣ  ಕಳೆಯುತಿರಲು 

ಅವಳೇ  ಉಳಿದ  ಬದುಕಿನ  ನಿಮಿತ್ತವು.