ಅವಳು ತಿಳಿದಂತೆ ನಾನು
ಈ ಕಥೆ ಬರೆದಿದ್ದು ನನ್ನ ಹುಬ್ಬಳ್ಳಿ ಧಾರವಾಡದ ಸಮಯದಲ್ಲಿ. ನನ್ನ ಬರವಣಿಗೆ ಆ ದಿನದ ನನ್ನ ಯೋಚನಾ ಲಹರಿಯ ಪ್ರೌಢಿಮೆ ಹೇಗಿತ್ತೋ ಹಾಗೆ ಕಥೆಯನ್ನು ಪೋಣಿಸಿದ್ದೆ. ಅದರಲ್ಲಿ ಬರುವ ಕಥಾ ಸನ್ನಿವೇಶ ಪಾತ್ರಗಳನ್ನು ನಿಜವಾದ ಪಾತ್ರಗಳ ಜೊತೆ ಜೋಡಿಸಿದ್ದೆ. ಇದು ಕಾಲ್ಪನಿಕ ಅಂತ ಮಾತ್ರ ಹೇಳಬಲ್ಲೆ. ಈ ಕಥಾ ನಾಯಕ ನಾಯಕನೇ ಅಲ್ಲ. ಅವನೊಂದು ಕಲ್ಪನೆ. ಅವನೊಂದು ಸ್ನೇಹ. ಅವನೊಂದು ಪ್ರೀತಿ. ಅವನೊಂದು ನಿರ್ಲ್ಯಕ್ಷ್ಯ, ಅವನೊಂದು ಅಂಜುಬುರುಕ, ಅವನೊಬ್ಬ ಹಠಮಾರಿ, ಅವನೊಬ್ಬ ಸಮಯ ತನ್ನೊಂದಿಗಿದೆ ಎಂದು ತಿಳಿದಿರುವ ಮೂರ್ಖ, ಇನ್ನೂ ಹಲವಾರು. ಓದಿ ನೀವೇ ಹೇಳಿ ಅವನೇನೆಂದು.
ಹುಬ್ಬಳ್ಳಿಯ ಜನಜಂಗುಳಿ ಇರುವ ಸ್ಥಳ ಅದು. ರೈಲ್ವೆ ನಿಲ್ದಾಣದ ಮುಂದಿನ ರಸ್ತೆ. ಅಲ್ಲೇ ಹತ್ತಿರ ಇರುವ ಮಿಶ್ರ ಚಾಟ್ ಅಲ್ಲಿ ನನ್ನ ಸ್ನೇಹಿತನ ಜೊತೆ ಕಚೋರಿ ತಿಂದು ಮುಗಿಸಿದ್ದೆ. ಧಾರವಾಡಕ್ಕೆ ಹೋಗುವ ಕೊನೆಯ ಬೇಂದ್ರೆ ಬಸ್ ಹತ್ತಿದೆ. ಇನ್ನೂ ರಾಣಿ ಚನ್ನಮ್ಮದಿಂದ ಬರುವ ಪ್ರಯಾಣಿಕರಿಗೆ ಬಸ್ ಕಾಯುತ್ತಾ ಇತ್ತು. ನಾನೋ ಕಿಡಕಿಯಿಂದ ಹೊರಗಡೆ ನೋಡೋದು , ನನ್ನ ಟಾಟಾ ಇಂಡಿಕಾಂ ಮೊಬೈಲ್ನಲ್ಲಿ ಸಮಯ ಎಷ್ಟಾಗಿದೆ ಎಂದು ನೋಡೋದು. ಹೀಗೆ ನೋಡುತ್ತಾ ನೋಡುತ್ತಾ ಏನೋ ಶಬ್ದ. ಏನಾಯ್ತು ಅಂತ ನೋಡಿದರೆ ಯಾರೋ ಹುಡುಗಿ ತನ್ನ ಬ್ಯಾಗನ್ನು ಮೇಲೆ ಬಸ್ಸಲ್ಲಿ ಎತ್ತಿ ಇಡಲು ತಡವರಿಸುತ್ತಿದ್ದಳು. ನಾನೋ ಹೋಗಿ ಬ್ಯಾಗ್ ಎತ್ತಿ ಮುಂದಿನ ಸೀಟ್ ಹತ್ತಿರ ಇಟ್ಟೆ. ಹಾಗೆ ಹುಡುಗಿ ನನ್ನ ನೋಡಿ ಸಿಹಿಯಾದ ಧ್ವನಿಯಲ್ಲಿ ಥ್ಯಾಂಕ್ಸ್ ಹೇಳಿದಾಗ ನಾನು ಅವಳ ಸುಂದರ ಕಣ್ಣ ಒಮ್ಮೆ ನೋಡಿದೆ.ನೋಡುತ್ತಾನೇ ಇರಬೇಕು ಅನ್ನುವಷ್ಟು ಸುಂದರ ಕಣ್ಣುಗಳು. ಏನು ಹೇಳ್ಬೇಕೋ ಅನ್ನುವಷ್ಟು ತಿಳಿಯದೆ ಪರವಾಗಿಲ್ಲ ಅಂತ ಮಾತ್ರ ಹೇಳಿದೆ.
ಆಗಿನ್ನೂ ಯವ್ವನದ ರೆಕ್ಕೆ ಹಾರಲು ಸಿದ್ಧವಾದಂತೆ ಕಂಡಿತು. ಕಾಲೇಜು ಮುಗಿದು ಕೆಲಸ ಮಾಡುತ್ತಿದ್ದರಿಂದ ಕಾಲೇಜಿನಲ್ಲಿ ಇದ್ದ ಮುಗ್ಧತೆ ಮತ್ತು ಸಂಕೋಚ ಕೊಂಚ ಕಡಿಮೇನೇ ಆಗಿತ್ತು. ನನ್ನ ಯೋಚನಾ ಲಹರಿಗಳೇ ವಿಚಿತ್ರವಾಗಿದ್ದವು. ಇನ್ನೂ ನನ್ನ ನಿಲ್ದಾಣ ಬಂದಾಗ ಕೊಂಚ ತಿರುಗಿ ಅವಳ ಹತ್ರ ನೋಡಿದೆ. ಅವಳಿಗೇನು ಅರೀವಾಗಬೇಕು ನಾನು ಇಲ್ಲೇ ಇಳಿಯುವುದು ಎಂದು. ಗಾಂಧಿನಗರದಲ್ಲಿ ನಾನು ಇಳಿದಾಗ ಎಂತದೋ ಒಂದು ಕಸಿವಿಸಿ. ಕಾಲೇಜಿನಲ್ಲಿ ಇಷ್ಟವಾದ ಹುಡುಗೀಯರೆಲ್ಲ ನನಗಿಂತ ಉದ್ದ ಇದ್ದರು. ಇವಳೋ ನನಿಗಿಂತ ಸ್ವಲ್ಪ ಗಿಡ್ಡ ಇರಬಹುದು. ಎಂತಹ ಸುಂದರ ಕಣ್ಣುಗಳು ಅಂತ ಇನ್ನೊಮ್ಮೆ ಅವಳ ಕಣ್ಣುಗಳನ್ನೇ ನನ್ನ ಮನದ ಒಂದು ಕೋಣೆಯಲ್ಲಿ ಭದ್ರವಾಗಿ ಮುಚ್ಚಿಟ್ಟಿದ್ದೆ. ಸೀದಾ ನಮ್ಮ ಬಾಡಿಗೆ ಮನೆಯ ಹತ್ತಿರ ಹೋದಾಗ ಆಗಲೇ ನನ್ನ ಗೆಳೆಯ ಮಲಿಗಿದ್ದ.
ನಾನು ಮತ್ತು ಕಾಶಿ ಒಂದೇ ಕಂಪನಿಯಲ್ಲಿ ಕೆಲಸ ಮಾಡೋದು. ನಾವು ಕಾಲೇಜಿನಲ್ಲಿ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದೆವು ಕೂಡ. ಆದಿ, ನಾನು ಮತ್ತು ಕಾಶಿ ಹೀಗೆ ಗೆಳೆತನ ಒಂದು ಕೊಂಡಿ ಇದ್ದಂತೆ. ಆದಿ ಅಂದರೆ ಅದೇ ಕಚೋರಿ ಗೆಳೆಯ. ಅವನ ಅಣ್ಣನೇ ನನ್ನ ಬಾಸ್. ಎಷ್ಟೋ ವಿಷಯದಲ್ಲಿ ಕಾಶಿ ಅಣ್ಣ ಇದ್ದ ಹಾಗೆ. ಜೀವನದಲ್ಲಿ ಎಷ್ಟೋ ವಿಷಯಗಳನ್ನು ಅವನಿಂದ ತಿಳಿದುಕೊಂಡಿದ್ದೆ. ಕಾಶಿ ಮಾತಾಡ್ತಾ ಇದ್ದರೆ ನಿಲ್ಲೋದೇ ಇಲ್ಲ. ಅವನು ನಾನು ಇನ್ನೂ ಚಿಕ್ಕವನು ಮತ್ತು ಹುಡುಗಿಯರ ವಿಷಯದಲ್ಲಿ ಮಾತಿನಲ್ಲಿ ಮಾತ್ರ ಅಂತಾನೇ ಹೇಳುತ್ತಿದ್ದ. ನಾನೋ ಅವನ ಪರಿಚಯದವಳ ಮೇಲೆ ಕವನ ಬರೆದಿದ್ದೆ. ಆ ಹುಡುಗಿ ಇವನನ್ನು ಅಣ್ಣ ಅಂತಾನೆ ಕರೀತಿದ್ದಳು. ಆದರೂ ಅವನಿಗೆ ನನ್ನ ಮೇಲೆ ಒಂದು ರೀತಿಯ ನಂಬಿಕೆ. ನನ್ನ ಪರೀದಿ ಮೀರಿ ಎಂದಿಗೂ ಹೊರಗಡೆ ಹೋಗಲ್ಲ ಅಂತಾನೇ ಅವನು ತಿಳಿದು ಕೊಂಡಿದ್ದ. ಮಾಡಿರುವ ತಪ್ಪನ್ನು ತಿದ್ದುಕೊಳ್ಳುವ ಚಾಕಚಕ್ಯತೆ ಇದೆ ಅಂತಾನೇ ಅವನು ಭಾವಿಸಿದ್ದ. ಆದರೂ ನಾನು ಹುಡುಗೀಯರ ವಿಷಯ ಅವನ ಹತ್ತಿರ ಹೇಳೋದಿಲ್ಲಾಗಿತ್ತು. ಯಾಕಂದ್ರೆ ನನ್ನ ಕಾಲು ಎಳೆಸ್ಕೊಳ್ಳಲು ನಾನು ಸಿದ್ದ ಇಲ್ಲಾಗಿತ್ತು.