ಅಮ್ಮ

1:04 PM 0 Comments A+ a-

 ಅಮ್ಮ ಎನ್ನುವ ಆ ಹೆಸರಲ್ಲಿ ಏನಿದೆಯೋ ?

ಬದುಕೇ ಆ ಎರಡಕ್ಷರದಲ್ಲಿ ಅಡಗಿದ ಭಾವವೋ,

ಮನದಾಳದಿಂದ ಕರೆಯುತ್ತಿದ್ದ ಆ ಧ್ವನಿಯಲ್ಲಿ

ಹುದುಗಿರುವ ಎಂತಹ ಶಕ್ತಿಯೋ,


ಕೈಹಿಡಿದು ನಡೆಸಿದ ಅಕ್ಕರೆಯ ಗಳಿಗೆಯೋ,

ತಿದ್ದಿ ಕಲಿಸಿದ ಆ ಕಪ್ಪು ಬಿಳುಪು ಅಕ್ಷರವೋ,

ಉಣಬಡಿಸಲು ತೋರುತ್ತಿದ್ದ ಚಂದ್ರಮನ ಮೊಗದಲ್ಲಿ,

ಅಮ್ಮನ ಕಾಣುತ್ತಿದ್ದ ಆ ಕ್ಷಣಮಾತ್ರದ ಸುಖವೋ.


ಆಟ ಆಡಿ ಬಂದಾಗ

ಸಿಗುತ್ತಿದ್ದ ಅಮ್ಮನ ಕೈ ತುತ್ತು,

ಓದಲು ಕುಳಿತಾಗ

ಮಗನ ಬಗ್ಗೆ ಇದ್ದ ಆ ದೃಡ ನಂಬಿಕೆಯೋ,


ದೂರ ದೂರ ಹೋದರೂ

ರಕ್ಷಿಸುತ್ತಿದ್ದ ಅಮ್ಮನ ಶ್ರೀ ರಕ್ಷೆಯೋ,

ದೇವರು ಮರೆತರೂ

ಬೆಂಬಿಡದೆ ಕಾಯುತ್ತಿದ್ದ ಅಮ್ಮನ ಪ್ರಾರ್ಥನೆಯೋ,


ಮಗನ ಸ್ವತಂತ್ರ ಬದುಕಿನ

ನಿಜ ಕಾರಣಕರ್ತೆಯು,

ದೇವರೇ ಇಲ್ಲದ ಈ ಜಗದಲಿ

ನಿಜ ದೇವತೆಯೋ


ಅಮ್ಮ ನೀ ನನ್ನೋಂದಿಗೆ ಇದ್ದರೆ ಸಾಕು,

ಬದುಕೇ ಪಾವನವು

ಅಮ್ಮ ನೀ ನನ್ನೋಂದಿಗೆ ಇದ್ದರೆ ಸಾಕು,

ನನ್ನ ಬದುಕಿಗೇ ಅರ್ಥವೋ.


ಅಮ್ಮ ಎನ್ನುವ ಹೆಸರಲ್ಲಿ

ಏನಿದೆ ಎಂದು ಕೇಳದಿರು,

ಅದೇ ಶಕ್ತಿಯು, ಅದೇ ಮೋಕ್ಷವು,

ಅದೇ ಜೀವನದ ಅರ್ಥವು.